ಬೇನಿಮ್, ಜಾನ್ ಮತ್ತು ಬೇನಿಮ್, ಮೈಕೇಲ್
1798-1842; 1796-1874. ಐರಿಷ್ ಕಾದಂಬರಿಕಾರರು. ಜಾನ್ ಮತ್ತು ಅವನ ಅಣ್ಣ ಮೈಕೇಲ್ ಇಬ್ಬರೂ ಸೇರಿ ಐರಿಷ್ ಕೃಷಿಕ ಜೀವನ ಚಿತ್ರಿಸುವ ಕಾದಂಬರಿ ಬರೆಯುತ್ತಿದ್ದುದರಿಂದ ಸಾಹಿತ್ಯಕ್ಷೇತ್ರದಲ್ಲಿ ಇಬ್ಬರದೂ ಅವಳಿ ಹೆಸರುಗಳಾಗಿವೆ. ಇಬ್ಬರೂ ಜನಿಸಿದ್ದು ಕಿಲ್ಕೆನ್ನಿ ಎಂಬಲ್ಲಿ. ತಂದೆ ಚಿಲ್ಲರೆ ವ್ಯಾಪಾರಿ; ಜೊತೆಗೆ ಕೃಷಿಕ. ಡಬ್ಲಿನ್ನಿನಲ್ಲಿ ಚಿತ್ರಕಲಾ ತರಬೇತಿ ಪಡೆದ ಜಾನ್ ಸ್ವಲ್ಪಕಾಲ ಕಿಲ್ಕೆನ್ನಿಯಲ್ಲಿ ಉಪಾಧ್ಯಾಯನಾಗಿ ಅನಂತರ ಪತ್ರಿಕೋದ್ಯಮಿಯಾದ. ಸರಳರಗಳೆಯಲ್ಲಿ ಬರೆದ ಡೇಮ್ನ ಅಂಡ್ ಪಿತಿಯಾಸ್ ಎಂಬ ರುದ್ರನಾಟಕ ಕವೆಂಟ್ ಕಾರ್ಡನ್‍ನಲ್ಲಿ ಪ್ರದರ್ಶಿತವಾಯಿತು (1821). ಜಾನ್ ಮದುವೆಯಾಗಿ ಲಂಡನ್ನಿನಲ್ಲಿ ನೆಲಸಿ, ಪತ್ರಿಕಾ ವೃತ್ತಿ ಮುಂದುವರಿಸಿದ. ಮೈಕೇಲ್ ಕಾನೂನು ಪರೀಕ್ಷೆಗೆ ಓದಿದರೂ ತಂದೆಯ ವೃತ್ತಿಗೇ ಅಂಟಿಕೊಂಡ. ಟೇಲ್ಸ್ ಬೈ ದಿ ಓ ಹಾರಾ ಫ್ಯಾಮಿಲಿ (1825) ಸೋದರರಿಬ್ಬರೂ ಸೇರಿ ಬರೆದ ಮೊದಲ ಕಥಾಸಂಕಲನ, ಇದರ ಮೂರೂ ಕತೆಗಳೂ (ಎರಡು ಜಾನ್‍ನವು) ಅಸಾಧಾರಣ ಕಲ್ಪನೆ, ರೋಮಾಂಚಕ ಸನ್ನಿವೇಶಗಳಿಂದ ಓದುಗರ ಮನಸ್ಸನ್ನು ಸೂರೆಗೊಂಡವು. ಜಾನ್ ಐರ್ಲೆಂಡಿನ ಸ್ಕಾಟ್ ಎಂಬ ಪ್ರಶಂಸೆಗೂ ಪಾತ್ರನಾದ. 1826ರಲ್ಲಿ ಐರ್ಲೆಂಡಿನ ಜಾಕೋ ಬೈಟ್ ಕದನವನ್ನು ಕುರಿತು ದಿ ಬಾಯ್ನ್ ವಾಟರ್ ಎಂಬ ಕಾದಂಬರಿಯೂ ಮಾರನೆವರ್ಷ ಮತ್ತೊಂದು ಕಥಾಸಂಕಲನವೂ ಹೊರಬಂದುವು. ದಿ ನೌಲಾನ್ಸ್ ಜಾನ್‍ನ ಶ್ರೇಷ್ಠ ಕಾದಂಬರಿ. ಭಾವತೀವ್ರತೆ, ಉಜ್ಜ್ವಲ ಧಾರ್ಮಿಕ ಮನೋಧರ್ಮ, ಬದುಕಿನ ಅಂತರಂಗ ದರ್ಶನ ಕಾದಂಬರಿಯನ್ನು ಉನ್ನತ ಗುಣಮಟ್ಟಕ್ಕೆ ಒಯ್ದಿದೆ. ದಿ ಡಿನೌನ್ಸ್‍ಡ್ (1830), ದಿ ಸ್ಮಗ್ಲರ್ (1831), ದಿ ಮೇಯರ್ ಆಫ್ ವಿಂಡ್ ಗ್ಯಾಪ್ (1835) ಇವು ಜಾನ್‍ನ ಇತರ ಕಾದಂಬರಿಗಳು. ಬೆನ್ನುಹುರಿಯ ಕಾಯಿಲೆ ಬಡತನ ಇವನ್ನು ಲೆಕ್ಕಿಸದೆ ಬರೆಯುತ್ತಿದ್ದ ಈತನಿಗೆ ಸಹಾಯಾರ್ಥ ನಿಧಿ ಸಂಗ್ರಹಿಸಿ ಕೊಡಲಾಯಿತು. 1835ರಲ್ಲಿ ಕಿಲ್ಕೆನ್ನಿಗೆ ಹಿಂತಿರುಗಿದ. ಸರಕಾರವೂ ಗೌರವ ವೇತನ ನೀಡಿತು. 1842ರಲ್ಲಿ ಜಾನ್ ವಿಧಿವಶನಾದ. ಫಾದರ್ ಕಾನೆಲ್ ಬೇನಿಮ್ ಸೋದರರ ಅತ್ಯಂತ ಹೃದ್ಯವಾದ ಕೃತಿ. ತಮ್ಮನ ಕಾಯಿಲೆಯ ದೆಸೆಯಿಂದ ಮೇಕೇಲನೇ ಈ ಕಾದಂಬರಿಯನ್ನು ಪೂರ್ಣಗೊಳಿಸಿದ ಸೋದರನ ಮರಣಾನಂತರ 31 ವರ್ಷ ಬುದುಕಿದ್ದ ಮೈಕೇಲ್ 1873ರ ತನಕವೂ ಬರೆಯುತ್ತಿದ್ದ.   
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ